ಸಾಹಿತ್ಯ
ಹಾಡುಗಬ್ಬ ಮತ್ತು ಓದುಗಬ್ಬ

ಇದು, ಕನ್ನಡ ಸಾಹಿತ್ಯದ ಮೊದಲ ಹಂತದಿಂದಲೂ ಇರುವ ಬಹಳ ಮುಖ್ಯವಾದ ಕರ್ಷಣಗಳಲ್ಲಿ(ಟೆನ್ಷನ್) ಒಂದು. ಇದಕ್ಕೆ ಅನೇಕ ಆಯಾಮಗಳಿವೆ. ಮೊದಲನೆಯದು ಮೌಖಿಕ ಪರಂಪರೆ ಮತ್ತು ಲಿಖಿತ ಪರಂಪರೆಗಳ ನಡುವಿನ ಆಯ್ಕೆಗೆ ಸಂಬಂಧಿಸಿದ್ದು. ಎರಡನೆಯದಾಗಿ, ಅದು ದ್ರಾವಿಡ ಸಂಸ್ಕೃತಿಯ ಸಂವಹನವಿಧಾನ ಮತ್ತು ಆರ್ಯಸಂಸ್ಕೃತಿಯ ಸಂವಹನವಿಧಾನಗಳ ನಡುವಿನ ಅಂತರದ ಕಡೆಗೂ ಗಮನ ಸೆಳೆಯುತ್ತದೆ. ಅದಲ್ಲದೆ, ಕೇವಲ ವಿದ್ವಾಂಸರನ್ನು ಉದ್ದೇಶಿಸಿ ಬರೆದ ಕವಿತೆಗೂ ಸಾಮಾನ್ಯ ಜನರಿಗೂ ತಲುಪಬೇಕೆಂಬ ಉದ್ದೇಶದಿಂದ ಬರೆದ ಕವಿತೆಗೂ ಇರುವ ವ್ಯತ್ಯಾಸವೂ ಇಲ್ಲಿ ಗಮನೀಯವಾಗುತ್ತದೆ. ಕವಿಗಳು ಮಾಡುವ ಆಯ್ಕೆಗಳ ಲೋಲಕವು, ಎರಡು ದಿಕ್ಕುಗಳಲ್ಲಿಯೂ ಚಲಿಸಿದೆ. ಆದಿಮವಾದ ಜಾನಪದ ಸಾಹಿತ್ಯದಿಂದ ಹಿಡಿದು, ನಮ್ಮ ಕಾಲದ ನವಮೌಖಿಕತೆಯವರೆಗೂ ಇಂತಹ ಆಯ್ಕೆಗಳ ಹರಹು ಇದೆ. ಲಿಪಿಯ ಉಗಮದ ನಂತರ, ಸರಿಸುಮಾರು ಎಲ್ಲ ಕಾಲಗಳಲ್ಲಿಯೂ ಎರಡೂ ಬಗೆಯ ಕಾವ್ಯಗಳು ಅಸ್ತಿತ್ವದಲ್ಲಿದ್ದು ಅವು ಬೇರೆ ಬೇರೆ ಬಗೆಯ ಓದುಗರನ್ನು ತಲುಪುತ್ತಿದ್ದವು.

ಓದುಗಬ್ಬ ಎಂದರೆ, ಅಕ್ಷರಸ್ಥರಾದವರು ಓದಬೇಕು ಅಥವಾ ಓದಿಕೊಳ್ಳಬೇಕು ಎಂಬ ಉದ್ದೇಶದಿಂದ ರಚಿತವಾದ ಕಾವ್ಯ. ಹಾಡುಗಬ್ಬ ಎಂದರೆ, ಹಾಡುವ ಅಥವಾ ಗಟ್ಟಿಯಾಗಿ ವಾಚನ ಮಾಡುವ ಉದ್ದೇಶದಿಂದ ಬರೆದಿರುವ ಕಾವ್ಯ. ಇಲ್ಲಿ ಹೇಳುತ್ತಿರುವುದು ಗದ್ಯ ಪದ್ಯಗಳ ನಡುವಿನ ವ್ಯತ್ಯಾಸವನ್ನಲ್ಲ. ಹಾಗೆಯೇ ಛಂದೋಬದ್ಧವಾದ ಕವಿತೆ ಮತ್ತು ಮುಕ್ತಕಾವ್ಯಗಳ ನಡುವಿನ ಅಂತರವೂ ಇಲ್ಲಿ ಪ್ರಸ್ತುತವಲ್ಲ. ಅದೇ ರೀತಿಯಲ್ಲಿ, ಎಲ್ಲ ಶ್ರೇಷ್ಠ ಕಾವ್ಯದಲ್ಲಿಯೂ ಅಂತರ್ಗತವಾಗಿರುವ ಮಾಧುರ್ಯದ ಬಗ್ಗೆಯೂ ನಾವು ಮಾತನಾಡುತ್ತಿಲ್ಲ.

ಹೀಗೆ ನಕಾರಾತ್ಮಕವಾದ ಸಂಗತಿಗಳನ್ನು ಹೇಳಿದ ನಂತರ, ಈ ಎರಡು ಬಗೆಯ ಕಾವ್ಯಗಳ ನಡುವಿನ ನಿಜವಾದ ವ್ಯತ್ಯಾಸವನ್ನು ಹೇಳುವ ಅಗತ್ಯವಿದೆ. ಮೌಖಿಕ ಪರಂಪರೆಯು ಹಾಡುವಿಕೆ ಮತ್ತು ಪ್ರದರ್ಶನಗಳಿಗೆ(ಪರ್ಫಾಮನ್ಸ್) ಒತ್ತು ಕೊಡುತ್ತದೆ. ಅನೇಕ ಸಲ, ಇಂತಹ ಚಟುವಟಿಕೆಗಳಿಂದ ಸಾಹಿತ್ಯವು ಸಮುದಾಯದ ಸದಸ್ಯರ ನಡುವೆ ಹಂಚಿಕೊಂಡ ಸಂಗತಿಯಾಗುತ್ತದೆ. ಲಿಪಿರಹಿತವಾದ ಭಾಷೆಗಳು ಇಂತಹ ಅಭ್ಯಾಸಗಳನ್ನು ರೂಪಿಸಿಕೊಳ್ಳುವ ಮತ್ತು ಕಾಪಾಡಿಕೊಳ್ಳುವ ಸಾಧ್ಯತೆಗಳು ಜಾಸ್ತಿ. ನಮಗೆ ತಿಳಿದಿರುವಂತೆ, ಬಹಳ ಮುಖ್ಯ ದ್ರಾವಿಡಭಾಷೆಯಾದ ತಮಿಳು, ಸಾಹಿತ್ಯರಚನೆಯು ಮೊದಲಾಗಿ ಎಷ್ಟೋ ಶತಮಾನಗಳ ತನಕ ತನ್ನದೇ ಆದ ಲಿಪಿಯನ್ನು ಹೊಂದಿರಲಿಲ್ಲ. ಸಹಜವಾಗಿಯೇ ಅದು ಮೌಖಿಕವಾದ ಮತ್ತು ಗೇಯವಾದ ನೆಲೆಗಳನ್ನು ಬಳಸಬೇಕಾಯಿತು. ಇದರ ಪರಿಣಾಮವಾಗಿಯೇ ದ್ರಾವಿಡ ಛಂದಸ್ಸು ಹೆಚ್ಚು ಗೇಯವಾದುದು. ಆಂಶಗಣದ ಛಂದೋರೂಪಗಳು ಈ ಛಂದಸ್ಸಿನ ಹೃದಯವೂ ಹೌದು, ತಳಹದಿಯೂ ಹೌದು. ಆದ್ದರಿಂದಲೇ ಕನ್ನಡದಲ್ಲಿ ನಡೆಯುವ ಮೌಖಿಕತೆ ಹಾಗೂ ಗೇಯತೆಗಳ ಕಡೆಗಿನ ಚಲನೆಯೂ ಅದರ ದ್ರಾವಿಡ ಮೂಲಗಳ ಕಡೆಗಿನ ಚಲನೆಯಾಗಿರುತ್ತದೆ.

ಹಳಗನ್ನಡ ಕಾವ್ಯವು, ಸಂಸ್ಕೃತದಿಂದ ತೀವ್ರವಾಗಿ ಪ್ರಭಾವಿತವಾಗಿತ್ತು. ಆದ್ದರಿಂದಲೇ, ಅವುಗಳಲ್ಲಿ ಅಕ್ಷರಗಣ ಛಂದಸ್ಸಿನ ಬಾಹುಳ್ಯವಿದ್ದು, ವೃತ್ತ ಮತ್ತು ಕಂದಪದ್ಯಗಳು ತಾವೇ ತಾವಾಗಿವೆ. ಕನ್ನಡದ ಮೊದಲ ಮಹಾಕವಿಯಾದ ಪಂಪನು ಅನೇಕ ದ್ರಾವಿಡ ಛಂದೋರೂಪಗಳನ್ನು ಬಳಸಿದನೆನ್ನುವುದು ನಿಜ. ಅಲ್ಲಿ ಪಿರಿಯಕ್ಕರ, ಗೀತಿಕೆ, ರಗಳೆ ಮುಂತಾದ ರೂಪಗಳನ್ನು ಅಲ್ಲಲ್ಲಿ ಕಾಣಬಹುದು. ಆದರೆ, ಈ ವಿಷಯದಲ್ಲಿ ಅವನದು ಪ್ರಧಾನಧಾರೆಯಾಗಿರಲಿಲ್ಲ. ನಡುಗನ್ನಡವು ಬಳಕೆಗೆ ಬಂದು, ಮಾತ್ರಾಗಣ ಛಂದಸ್ಸಿನ ಉಪಯೋಗವು ವ್ಯಾಪಕವಾದ ನಂತರವೂ ಇದೇ ಸನ್ನಿವೇಶವು ಮುಂದುವರಿಯಿತು. ಆದರೆ, ಈ ಎಲ್ಲ ಶತಮಾನಗಳಲ್ಲಿಯೂ ಜನಪದ ಸಾಹಿತ್ಯವು ದ್ರಾವಿಡ ಛಂದಸ್ಸಿನಲ್ಲಿಯೇ ರಚಿತವಾಗುತ್ತಿತ್ತು ಎನ್ನುವುದನ್ನು ಮರೆಯಬಾರದು. ಪಂಪಪೂರ್ವಯುಗದಲ್ಲಿಯೇ ಬಳಕೆಯಲ್ಲಿದ್ದ ಬೆದಂಡೆ ಮತ್ತು ಚತ್ತಾಣಗಳು ಕೂಡ ಈ ಬಗೆಯ ರಚನೆಗಳೇ ಆಗಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ.

ಆದರೆ, ಸಾಂಗತ್ಯದಂತಹ ಅಂಶಗಣಕ್ಕೆ ಸೇರಿದ ಛಂದೋರೂಪವನ್ನು ಉಪಯೋಗಿಸಿ, ಇಡೀ ಕಾವ್ಯವನ್ನೇ ಬರೆದವರಲ್ಲಿ ರತ್ನಾಕರವರ್ಣಿಯು ಮುಖ್ಯನಾದವನು. ಅವನ ಭರತೇಶವೈಭವವು, ಅನನ್ಯವಾದ ಕೃತಿ. ಸಾಂಗತ್ಯವನ್ನು ಸೃಷ್ಟಿಸಿದ್ದು ರತ್ನಾಕರನಲ್ಲ. ಆದರೆ, ಅವನು ಅದನ್ನು ಪೂರ್ಣಪ್ರಮಾಣದಲ್ಲಿ ಬಳಸಿದವನು, ಬೆಳೆಸಿದವನು. ಅದರಲ್ಲಿ ಬರೆಯಬೇಕೆಂಬ ಅವನ ಆಯ್ಕೆಯು ಬಹಳ ಮುಖ್ಯವಾದುದು. ತನ್ನ ಕಾವ್ಯವು ಸಾಮಾನ್ಯ ಜನರಿಗೆ ಮತ್ತು ಗೃಹಿಣಿಯರಿಗೆ ತಲುಪಬೇಕೆಂದು ಇಷ್ಟಪಟ್ಟ ಈ ಕವಿಯು ಸರಿಯಾದ ಆಯ್ಕೆಯನ್ನೇ ಮಾಡಿದನು. 'ಹದಿಬದೆಯಧರ್ಮ ಮತ್ತು ಕುಮಾರರಾಮನ ಸಾಂಗತ್ಯಗಳು ಕನ್ನಡದ ಇತರ ಮುಖ್ಯವಾದ ಹಾಡುಗಬ್ಬಗಳು. ಜನಪದ ಮಹಾಕಾವ್ಯಗಳಂತೂ ಮೂಲನೆಲೆಯಲ್ಲಿಯೇ ಹಾಡುಗಬ್ಬಗಳು.

ವಚನಗಳು ಮತ್ತು ಕೀರ್ತನೆಗಳನ್ನು ಸಂಗೀತಕ್ಕೆ ಅಳವಡಿಸಿದಾಗ ಈ ಓಲುವೆಯು ಮುಂದುವರಿಯಿತು. ತತ್ವದ ಪದಗಳು ಇದೇ ಚಲನೆಯ ಇನ್ನೊಂದು ಬಾಗಿಲನ್ನು ತೆರೆದವು. ಇಪ್ಪತ್ತನೆಯ ಶತಮಾನದ ಆಧುನಿಕ ಕವಿಗಳು ಕೂಡ ಇಂತಹ ಕವಿತೆಗಳನ್ನು ಬರೆದಿದ್ದಾರೆ.(ಬೇಂದ್ರೆಯವರ ಸಖೀಗೀತ, ಕಂಬಾರರ ಹೇಳತೇನ ಕೇಳ ಇತ್ಯಾದಿ.) ಈಚಿನ ದಶಕಗಳಲ್ಲಿ ಜನಪದ ಸಂಗೀತ ಮತ್ತು ಜನಪದ ಮಹಾಕಾವ್ಯಗಳನ್ನು ಮರಳಿ ಕಂಡುಕೊಂಡ ನಂತರ ಈ ಸಿದ್ಧಾಂತಕ್ಕೆ ಇನ್ನಷ್ಟು ಬಲ ಬಂದಿದೆ. ಇದೆಲ್ಲದರ ನಡುವೆ ಅನೇಕ ಕವಿಗಳು ಬರವಣಿಗೆಯ ಬಗೆಗಿನ ತಮ್ಮ ನಿಷ್ಠೆಯನ್ನು ಮುಂದುವರಿಸಿದ್ದಾರೆ. ಬರವಣಿಗೆ ಮತ್ತು ಓದುಗಳು, ಕಾವ್ಯದ ರಸಗ್ರಹಣವನ್ನು ಖಾಸಗಿಯಾದ ಚಟುವಟಿಕೆಯಾಗಿ ಮಾರ್ಪಡಿಸುತ್ತದೆ. ವಿಮರ್ಶೆಯ ಮಧ್ಯಪ್ರವೇಶವಿದ್ದಾಗಲೂ ಈ ಮಾತು ನಿಜ.

ಹೀಗೆ, ಹಾಡುಗಬ್ಬ ಮತ್ತು ಓದುಗಬ್ಬಗಳು ಕನ್ನಡಕಾವ್ಯವನ್ನು ರೂಪಿಸಿದ ಪ್ರಮುಖ ಪರಿಕಲ್ಪನೆಗಳು.

ಮುಖಪುಟ / ಸಾಹಿತ್ಯ